ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್; ರೋಹಿತ್ ರೋಷಾವೇಶಕ್ಕೆ ನಿರ್ಮಾಣವಾದ ದಾಖಲೆ ಒಂದೆರಡಲ್ಲ!

ಆಸ್ಟ್ರೇಲಿಯಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್; ರೋಹಿತ್ ರೋಷಾವೇಶಕ್ಕೆ ನಿರ್ಮಾಣವಾದ ದಾಖಲೆ ಒಂದೆರಡಲ್ಲ!

Rohit Sharma Record: ಆಸ್ಟ್ರೇಲಿಯಾ ವಿರುದ್ಧದ‌ ಟಿ20 ವಿಶ್ವಕಪ್‌ ಸೂಪರ್‌ 8 ಪಂದ್ಯದಲ್ಲಿ ರೋಹಿತ್‌ ಶರ್ಮಾ ಅಕ್ಷರಶಃ ಸಿಡಿದಿದ್ದಾರೆ. ಬೌಂಡರಿ ಸಿಕ್ಸರ್‌ಗಳಿಂದಲೇ ತಂಡದ ರನ್‌ ಹೆಚ್ಚಿಸಿದ ಹಿಟ್‌ಮ್ಯಾನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ರೋಹಿತ್ ಶರ್ಮಾ ರೋಷಾವೇಶಕ್ಕೆ ನಿರ್ಮಾಣವಾದ ದಾಖಲೆ ಒಂದೆರಡಲ್ಲ
ರೋಹಿತ್ ಶರ್ಮಾ ರೋಷಾವೇಶಕ್ಕೆ ನಿರ್ಮಾಣವಾದ ದಾಖಲೆ ಒಂದೆರಡಲ್ಲ (PTI)

ಆಸ್ಟ್ರೇಲಿಯಾ ವಿರುದ್ಧದ ಟಿ20 ವಿಶ್ವಕಪ್‌ ಸೂಪರ್‌ 8 ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅಬ್ಬರಿಸಿ ಬೊಬ್ಬಿರಿದರು. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಸೋಲನ್ನು ನೆನಪಿನಲ್ಲಿಟ್ಟುಕೊಂಡು ಕಾಂಗರೂಗಳ ವಿರುದ್ಧ ಸಿಡಿದ ಹಿಟ್‌ಮ್ಯಾನ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಮೈದಾನದ ಅಷ್ಟ ದಿಕ್ಕುಗಳಿಗೂ ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದು ದಾಖಲೆಯ ಬೆಟ್ಟವೇ ನಿರ್ಮಿಸಿದರು. ಕೇವಲ 8 ರನ್‌ ಅಂತರದಿಂದ ಶತಕ ವಂಚಿತರಾದರೂ, ಹಲವು ದಾಖಲೆ ನಿರ್ಮಿಸಿ ಆಸೀಸ್‌ ಬೌಲರ್‌ಗಳ ಬೆವರಿಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಹಿಟ್‌ಮ್ಯಾನ್‌ ನಿರ್ಮಿಸಿದ ದಾಖಲೆಗಳನ್ನು ನೋಡೋಣ.

ಟ್ರೆಂಡಿಂಗ್​ ಸುದ್ದಿ

ಆಸೀಸ್‌ ವಿರುದ್ಧ 224.39ರ ಭರ್ಜರಿ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರೋಹಿತ್‌, ಕೇವಲ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್‌ ಸಹಿತ 92 ರನ್‌ ಸಿಡಿಸಿದರು. ಈ ವೇಳೆ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ಕ್ಲೀನ್‌ ಬೋಲ್ಡ್‌ ಆದರು. ಅದಕ್ಕೂ ಮುನ್ನ ಟೀಮ್‌ ಇಂಡಿಯಾ ನಾಯಕ ನಿರ್ಮಿಸಿದ ದಾಖಲೆಗಳು ಹೀಗಿವೆ.

ಮಿಚೆಲ್‌ ಸ್ಟಾರ್ಕ್‌ ಎಸೆದ ಒಂದೇ ಓವರ್‌ನಲ್ಲಿ 29 ರನ್

ಭಾರತದ ಇನಿಂಗ್ಸ್‌ನ ಮೂರನೇ ಓವರ್‌ ಎಸೆಯಲು ಬಂದ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ರೋಹಿತ್‌ ಶರ್ಮಾ ಒಬ್ಬರೇ 29 ರನ್‌ ಸಿಡಿಸಿದರು.‌ ಟಿ20 ಕ್ರಿಕೆಟ್‌ನಲ್ಲಿ ಓವರ್‌ ಒಂದರಲ್ಲಿ ಸ್ಟಾರ್ಕ್‌ ಬಿಟ್ಟುಕೊಟ್ಟ ಅತಿ ಹೆಚ್ಚು ರನ್‌ಗಳಿವು. ಈ ಎಲ್ಲಾ ರನ್‌ ರೋಹಿತ್‌ ಬ್ಯಾಟ್‌ನಿಂದಲೇ ಬಂದವು. ಇದರಲ್ಲಿ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದೆ.

ನೂರು ಮೀಟರ್‌ ಉದ್ದದ ಸಿಕ್ಸ್

ಪಂದ್ಯದ ಐದನೇ ಓವರ್‌ ಎಸೆಯಲು ಬಂದ ಪ್ಯಾಟ್‌ ಕಮ್ಮಿನ್ಸ್ ಅವರ ಮೊದಲ ಎಸೆತವನ್ನು ರೋಹಿತ್ ಸಿಕ್ಸರ್‌ಗಟ್ಟಿದರು. ಡೀಪ್ ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್‌ ಬಾರಿಸಿದ ಈ ಚೆಂಡು 100 ಮೀಟರ್‌ ದೂರಕ್ಕೆ ಹಾರಿ ಸೇಂಟ್‌ ಲೂಸಿಯಾ ಕ್ರೀಡಾಂಗಣದ ಚಾವಣಿ ಮೇಲೆ ಬಿತ್ತು.

200 ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ

ಕಮಿನ್ಸ್‌ ಎಸೆತದಲ್ಲಿ ಸಿಕ್ಸರ್‌ ಸಿಡಿಸುವ ಮೂಲಕ, ರೋಹಿತ್‌ ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ಬರೆದರು. ಅಂತಾರಾಷ್ಟ್ರೀಯ ಟಿ20ಯಲ್ಲಿ 200 ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡರು.

ಈ ಬಾರಿಯ ಟಿ20 ವಿಶ್ವಕಪ್‌ನ ವೇಗದ ಅರ್ಧಶತಕ

ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ರೋಹಿತ್‌ ಅರ್ಧಶತಕ ಸಿಡಿಸಿದರು. ಪ್ರಸಕ್ತ ಆವೃತ್ತಿಯ ಟೂರ್ನಿಯಲ್ಲಿ ಇದು ವೇಗದ ಅರ್ಧಶತಕವಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ವೇಗದ ಅರ್ಧಶತಕ ಸಿಡಿಸಿದ ಆಟಗಾರರು

  • ಯುವರಾಜ್ ಸಿಂಗ್ (ಇಂಗ್ಲೆಂಡ್‌ ವಿರುದ್ಧ, ಡರ್ಬನ್ 2007) -12 ಎಸೆತ
  • ಕೆಎಲ್ ರಾಹುಲ್ (ಸ್ಕಾಟ್ಲೆಂಡ್‌ ವಿರುದ್ಧ , ದುಬೈ 2021) -18 ಎಸೆತ
  • ಸೂರ್ಯಕುಮಾರ್ ಯಾದವ್ (ದಕ್ಷಿಣ ಆಫ್ರಿಕಾ ವಿರುದ್ಧ, ಗುವಾಹಟಿ 2022) -18 ಎಸೆತ
  • ಗೌತಮ್ ಗಂಭೀರ್ (ಶ್ರೀಲಂಕಾ ವಿರುದ್ಧ, ನಾಗ್ಪುರ 2009) -19 ಎಸೆತ
  • ರೋಹಿತ್ ಶರ್ಮಾ (ಆಸ್ಟ್ರೇಲಿಯಾ ವಿರುದ್ಧ, ಸೈಂಟ್‌ ಲೂಸಿಯಾ 2024) -19 ಎಸೆತ

ಇದನ್ನೂ ಓದಿ | ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ; ವಾಸಿಂ ಜಾಫರ್

ತಂಡವೊಂದರ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರು

  • 131* -ರೋಹಿತ್ ಶರ್ಮಾ (ಆಸ್ಟ್ರೇಲಿಯಾ ವಿರುದ್ಧ)
  • 130 -ಕ್ರಿಸ್ ಗೇಲ್ (ಇಂಗ್ಲೆಂಡ್ ವಿರುದ್ಧ)
  • 88 -ರೋಹಿತ್ ಶರ್ಮಾ (ವೆಸ್ಟ್‌ ಇಂಡೀಸ್‌ ವಿರುದ್ಧ)
  • 87 -ಕ್ರಿಸ್ ಗೇಲ್ (ನ್ಯೂಜಿಲ್ಯಾಂಡ್‌ ವಿರುದ್ಧ)
  • 86 -ಶಾಹಿದ್ ಅಫ್ರಿದಿ (ಶ್ರೀಲಂಕಾ ವಿರುದ್ಧ)

ಟಿ20 ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ವೈಯಕ್ತಿಕ ಅತ್ಯಧಿಕ ಸ್ಕೋರ್

  • 92 - ಆಸ್ಟ್ರೇಲಿಯಾ ವಿರುದ್ಧ, 2024 (ಇಂದು)
  • 79* - ಆಸ್ಟ್ರೇಲಿಯಾ ವಿರುದ್ಧ, ಬ್ರಿಡ್ಜ್‌ಟೌನ್, 2010
  • 74 - ಅಫ್ಘಾನಿಸ್ತಾನ ವಿರುದ್ಧ, ಅಬುಧಾಬಿ, 2022
  • 62* - ವೆಸ್ಟ್‌ ಇಂಡೀಸ್ ವಿರುದ್ಧ, ಮೀರ್ಪುರ್ 2014

ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರರು

  • 101 -ಸುರೇಶ್ ರೈನಾ (ದಕ್ಷಿಣ ಆಫ್ರಿಕಾ ವಿರುದ್ಧ, ಗ್ರಾಸ್ ಐಲೆಟ್ 2010)
  • 92 - ರೋಹಿತ್ ಶರ್ಮಾ (ಆಸ್ಟ್ರೇಲಿಯಾ ವಿರುದ್ಧ, ಗ್ರಾಸ್ ಐಲೆಟ್ 2024)
  • 89* ವಿರಾಟ್ ಕೊಹ್ಲಿ‌ (ವೆಸ್ಟ್‌ ಇಂಡೀಸ್ ವಿರುದ್ಧ‌, ವಾಂಖೆಡೆ 2016)
  • 82* ವಿರಾಟ್ ಕೊಹ್ಲಿ (ಆಸ್ಟ್ರೇಲಿಯಾ ವಿರುದ್ಧ, ಮೊಹಾಲಿ 2022)
  • 82* ವಿರಾಟ್ ಕೊಹ್ಲಿ (ಪಾಕಿಸ್ತಾನ ವಿರುದ್ಧ, ಮೆಲ್ಬೋರ್ನ್ 2022)

ಟಿ20 ವಿಶ್ವಕಪ್ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | ಟಿ20 ವಿಶ್ವಕಪ್: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ

ಟಿ20 ವರ್ಲ್ಡ್‌ಕಪ್ 2024