ಕನ್ನಡ ಸುದ್ದಿ  /  ಕ್ರಿಕೆಟ್  /  ಸಚಿನ್, ಸೆಹ್ವಾಗ್, ರೈನಾ, ಯುವರಾಜ್; ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆಯನ್ನು ಹಾಡಿ ಹೊಗಳಿದ ದಿಗ್ಗಜರು

ಸಚಿನ್, ಸೆಹ್ವಾಗ್, ರೈನಾ, ಯುವರಾಜ್; ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆಯನ್ನು ಹಾಡಿ ಹೊಗಳಿದ ದಿಗ್ಗಜರು

ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವನ್ನು ವಿಶ್ವದ ದಿಗ್ಗಜ ಕ್ರಿಕೆಟಿಗರು ಹಾಡಿ ಹೊಗಳಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವಿರೇಂದ್ರ ಸೆಹ್ವಾಗ್‌, ಯುವರಾಜ್‌ ಸಿಂಗ್‌ ಹಾಗೂ ಸುರೇಶ್ ರೈನಾ ಇವರಲ್ಲಿ ಅಗ್ರಗಣ್ಯರು.

ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆಯನ್ನು ಹಾಡಿ ಹೊಗಳಿದ ದಿಗ್ಗಜರು
ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆಯನ್ನು ಹಾಡಿ ಹೊಗಳಿದ ದಿಗ್ಗಜರು

ಅಫ್ಘಾನಿಸ್ತಾನ ಕ್ರಿಕೆಟ್‌ ತಂಡ ಐತಿಹಾಸಿಕ ಸಾಧನೆ ಮಾಡಿದ್ದು, ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್‌ ಪ್ರವೇಶಿಸಿದೆ. ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 8 ರನ್‌ಗಳಿಂದ ರೋಚಕ ಗೆಲುವು ಸಾಧಿಸಿದ ತಂಡವು, ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಕದನಕ್ಕೆ ಸಿದ್ಧತೆ ನಡೆಸುತ್ತಿದೆ. ಟೂರ್ನಿಯಲ್ಲಿ ಈಗಾಗಲೇ ಬಲಿಷ್ಠ ನ್ಯೂಜಿಲ್ಯಾಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅದ್ವಿತೀಯ ಗೆಲುವು ಸಾಧಿಸಿದ ತಂಡ, ಮುಂದೆ ವಿಶ್ವಕಪ್ ಎತ್ತಿಹಿಡಿಯಲು ಎರಡು ಹೆಜ್ಜೆ ಮಾತ್ರವೇ ದೂರವಿದೆ. ಅಫ್ಘಾನಿಸ್ತಾನ ಈ ಐತಿಹಾಸಿಕ ಸಾಧನೆಗೆ ಜಾಗತಿಕ ಕ್ರಿಕೆಟ್‌ ರಂಗವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ತೆಂಡೂಲ್ಕರ್‌, ಸೆಹ್ವಾಗ್‌ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಶೀದ್ ಖಾನ್ ನೇತೃತ್ವದಲ್ಲಿ ಅಫ್ಘಾನಿಸ್ತಾನ ತಂಡವು ವಿಶ್ವಕಪ್ ಸೆಮಿಫೈನಲ್‌ ಪ್ರವೇಶಿಸುತ್ತಿದ್ದಂತೆಯೇ, ಅಫ್ಘಾನಿಸ್ತಾನದ ಬೀದಿ ಬೀದಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಅಫ್ಘಾನಿಸ್ತಾನ ಟೂರ್ನಿಯಲ್ಲಿ ಈ ಹಿಂದೆ ಲೀಗ್ ಹಂತದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಗೆದ್ದಿತ್ತು. ಆ ಬಳಿಕ ಸೂಪರ್ 8 ಮುಖಾಮುಖಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ ಬಾಂಗ್ಲಾದೇಶವನ್ನು ಮಣಿಸಿದೆ. ಅಫ್ಘಾನಿಸ್ತಾನದ ಐತಿಹಾಸಿಕ ಸಾಧನೆಗೆ ಭಾರತದ ಕ್ರಿಕೆಟ್‌ ಐಕಾನ್‌ಗಳಾದ ಸಚಿನ್ ತೆಂಡೂಲ್ಕರ್ ಭರ್ಜರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

"ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಂಥ ಬಲಿಷ್ಠ ತಂಡಗಳನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದ ನಿಮ್ಮ ಹಾದಿ ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಇದನ್ನು ಮುಂದುವರಿಸಿ!" ಎಂದು ತೆಂಡೂಲ್ಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ರಶೀದ್ ಬಳಗವನ್ನು ಶ್ಲಾಘಿಸಿದರು. “ವಾಹ್, ಅಫ್ಘಾನಿಸ್ತಾನ. ಎಂಥಾ ಪ್ರಯತ್ನ. ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವಕಪ್‌ನ ಸೆಮಿಫೈನಲ್‌ ಸ್ಥಾನ ಗಿಟ್ಟಿಸಿಕೊಂಡಿದ್ದೀರಿ. ಪ್ರಗತಿ ಎಂದರೆ ಇದೇ. ಅಭಿನಂದನೆಗಳು,” ಎಂದು ವೀರು ಟ್ವೀಟ್‌ ಮಾಡಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಕೂಡಾ ತಂಡವನ್ನು ಶ್ಲಾಘಿಸಿದ್ದಾರೆ.

"ಮೈದಾನ ಪೂರ್ತಿ ಅದ್ಭುತ ದೃಶ್ಯಕಾವ್ಯ. ಅಫ್ಘಾನಿಸ್ತಾನಕ್ಕೆ ಎಂಥಾ ಗೆಲುವು. ಕೊನೆಯವರೆಗೂ ರೋಚಕ! ಅಫ್ಘನ್ನರು ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸುತ್ತಿದ್ದಂತೆ ಭಾವನೆಗಳು ಉತ್ತುಂಗಕ್ಕೇರಿದವು! ನವೀನ್‌ ಉಲ್‌ ಹಕ್‌ ಅವರಿಂದ ಪಂದ್ಯಶ್ರೇಷ್ಠ ಪ್ರದರ್ಶನ," ಎಂದು ಯುವರಾಜ್ ಟ್ವೀಟ್‌ ಮಾಡಿದ್ದಾರೆ.

"ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ! ಅದ್ಭುತ ಕೌಶಲ್ಯ ಮತ್ತು ದೃಢನಿಶ್ಚಯದೊಂದಿಗೆ ಆಟಗಾರರು ಪಂದ್ಯಾವಳಿಯುದ್ದಕ್ಕೂ ಮಿಂಚುತ್ತಿದ್ದಾರೆ. ಆವೇಗವನ್ನು ಮುಂದುವರಿಸಿ, ಹುಡುಗರೇ!" ಎಂದು ರೈನಾ ಪೋಸ್ಟ್ ಮಾಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಕೂಡಾ ವಿಜೇತರನ್ನು ಅಭಿನಂದಿಸಿದ್ದಾರೆ. "ವಾಹ್ ಎಂಥಾ ಆಟ. ಕೊನೆಯವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಗೆದ್ದ ಅಫ್ಘಾನಿಸ್ತಾನ ತಂಡದ ವಿಶೇಷ ಸಾಧನೆಗೆ ಅಭಿನಂದನೆಗಳು" ಎಂದು ಮೂಡಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್‌ ಕಮ್ರಾನ್ ಅಕ್ಮಲ್‌ ಕೂಡಾ ರಶೀದ್ ಮತ್ತು ನವೀನ್-ಉಲ್-ಹಕ್ ಅವರ ಅದ್ಭುತ ಬೌಲಿಂಗ್ ಅನ್ನು ಶ್ಲಾಘಿಸಿದ್ದಾರೆ. "ಸೆಮಿಫೈನಲ್ ತಲುಪಿದ ಅಫ್ಘಾನಿಸ್ತಾನಕ್ಕೆ ಅಭಿನಂದನೆಗಳು. ಇದು ಅದ್ಭುತ ಕ್ರಿಕೆಟ್. ಎಂಥಾ ಸಾಧನೆ. ರಶೀದ್ ಮತ್ತು ನವೀನ್-ಉಲ್-ಹಕ್ ಅವರಿ��ದ ಅತ್ಯುತ್ತಮ ಬೌಲಿಂಗ್," ಎಂದು ಅಕ್ಮಲ್ ಟ್ವೀಟ್ ಮಾಡಿದ್ದಾರೆ.

ಇಷ್ಟೇ ಅಲ್ಲದೆ, ರಾಬಿನ್‌ ಉತ್ತಪ್ಪ, ಆರ್‌ ಅಶ್ವಿನ್‌ ಕೂಡಾ ತಂಡಕ್ಕೆ ಶುಭ ಹಾರೈಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024